ನ್ಯಾ.ದಿನೇಶ್ ಮಹೇಶ್ವರಿ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಯಾಗಿ ಬಡ್ತಿ
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ನೀಡಲಾಗಿದೆ.
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ.
ಸುಪ್ರೀಂ ಕೋರ್ಟ್ ಕೊಲಿಜಿಯಂ ಈ ಇಬ್ಬರ ಹೆಸರನ್ನು ಶಿಫಾರಸು ಮಾಡಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ್ ಜನೇವರಿ 16 ರ ಬುಧವಾರ ಸಂಜೆ ನೇಮಕ ಆದೇಶಕ್ಕೆ ಸಹಿ ಹಾಕಿದ್ದಾರೆ. ಇದರೊಂದಿಗೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಸಂಖ್ಯೆ 28ಕ್ಕೆ ಏರಿದೆ. ಇನ್ನೂ ಮೂರು ನ್ಯಾಯಮೂರ್ತಿಗಳ ಹುದ್ದೆ ಖಾಲಿ ಉಳಿದಿವೆ.
ಎಕ್ಜಿಮ್ ಬ್ಯಾಂಕ್ ಗೆ 6000 ಕೋಟಿ ರೂ. ಬಂಡವಾಳ ನೆರವು ಕೇಂದ್ರ ಸಚಿವ ಸಂಪುಟ ಅನುಮೋದನೆ
ಸಾರ್ವಜನಿಕ ವಲಯದ ಎಕ್ಸಿಮ್ ಬ್ಯಾಂಕ್‌ಗೆ 6,000 ಕೋಟಿ ರೂ.ಗಳ ಬಂಡವಾಳ ನೆರವು ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.
ಬ್ಯಾಂಕಿನ ಬಂಡವಾಳವನ್ನು 10ರಿಂದ 20 ಸಾವಿರ ಕೋಟಿ ರೂ.ಗೆ ಏರಿಸುವ ಪ್ರಸ್ತಾಪವನ್ನು ಸಚಿವ ಸಂಪುಟ ಅಂಗೀಕರಿಸಿದೆ. ಎಕ್ಸಿಮ್ ಬ್ಯಾಂಕ್‌ಗೆ ಬಂಡವಾಳ ನೆರವು ನೀಡುವುದರಿಂದ ರಫ್ತು ವಲಯಕ್ಕೆ ಸಾಲ ವಿತರಣೆ ಹಾಗೂ ರಫ್ತುದಾರರಿಗೆ ಅನುಕೂಲಕರವಾಗಲಿದೆ.
ರಫ್ತುದಾರರಿಗೆ ಸಾಲ ಸೌಲಭ್ಯ ಒದಗಿಸುವ ಭಾರತದ ಪ್ರಮುಖ ಬ್ಯಾಂಕ್ ಎಕ್ಸಿಮ್ ಬ್ಯಾಂಕ್ ಆಗಿದೆ. 1982ರಲ್ಲಿ ಸರಕಾರ ಇದನ್ನು ಸ್ಥಾಪಿಸಿತ್ತು. ದೇಶದ ರಫ್ತು ವಲಯಕ್ಕೆ ಹಣಕಾಸು ನೆರವು ಮೂಲಕ ಉತ್ತೇಜನ ನೀಡುವುದು ಇದರ ಉದ್ದೇಶ.
ಬ್ರೆಕ್ಸಿಟ್ ಒಪ್ಪಂದ. ಬ್ರಿಟನ್ ಸಂಸತ್ ಗೆ ಸೋಲು
ಐರೋಪ್ಯ ಒಕ್ಕೂಟದಿಂದ ಹೊರಬರಲು ಬ್ರಿಟನ್ ಪ್ರಧಾನ ಮಂತ್ರಿ ಥೆರೇಸಾ ಮೇ ಮಾಡಿಕೊಂಡಿದ್ದ ಬ್ರೆಕ್ಸಿಟ್ ಒಪ್ಪಂದಕ್ಕೆ ಬ್ರಿಟನ್ ಸಂಸತ್ತಿನಲ್ಲಿ ಸೋಲಾಗಿದೆ.
ಸಂಸತ್ನಲ್ಲಿ ಬ್ರೆಕ್ಸಿಟ್ ಒಪ್ಪಂದದ ಕುರಿತಾದ ವಿಧೇಯಕವನ್ನು 2019 ಜನೇವರಿ 15 ರ ಮಂಗಳವಾರ ಮತಕ್ಕೆ ಹಾಕಲಾಗಿತ್ತು. ಮತ ಪ್ರಕ್ರಿಯೆಯಲ್ಲಿ ಒಪ್ಪಂದ ಪರ 202 ಸಂಸದರ ಮತ ಚಲಾಯಿಸಿದರೆ ವಿರುದ್ಧವಾಗಿ 432 ಮತಗಳು ಚಲಾವಣೆಯಾಗಿವೆ. ಈ ಮೂಲಕ ವಿಧೇಯಕ ಸರ್ವಾನುಮತದಿಂದ ತಿರಸ್ಕೃತವಾಗಿದೆ.
ಏನಿದು ಬ್ರೆಕ್ಸಿಟ್?
28 ದೇಶಗಳು ಸೇರಿ ರಚಿಸಿಕೊಂಡಿರುವ ರಾಜಕೀಯ ಮತ್ತು ಆರ್ಥಿಕ ಸಂಘಟನೆಯೇ ಐರೋಪ್ಯ ಒಕ್ಕೂಟ. ಇದಕ್ಕೆ ಬ್ರಿಟನ್ 1973ರಲ್ಲಿ ಸೇರ್ಪಡೆಯಾಯಿತು. 1980 ಮತ್ತು 90ರ ದಶಕದಿಂದಲೇ ಐರೋಪ್ಯ ಒಕ್ಕೂಟದಿಂದ ಹೊರಬರಬೇಕು ಎಂಬ ಕೂಗು ಬ್ರಿಟನ್ನಲ್ಲಿ ಕೇಳಿಬಂದಿತ್ತು. ಬ್ರೆಕ್ಸಿಟ್ ಹೆಸರಿನ ಆಂದೋಲನಗಳು ನಡೆದವು. 2015ರ ಚುನಾವಣೆಯಲ್ಲಿ ಈ ಆಗ್ರಹವನ್ನು ಡೇವಿಡ್ ಕ್ಯಾಮರನ್ ಚುನಾವಣಾ ಪ್ರಣಾಳಿಕೆಯಲ್ಲೂ ಸೇರಿಸಿದರು. ಆಶ್ವಾಸನೆಯಂತೆ 2016ರ ನವೆಂಬರ್ 23ರಂದು ಜನಮತ ಗಣನೆ ನಡೆದು ಶೇ. 52 ಮಂದಿ ಬ್ರೆಕ್ಸಿಟ್ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಇದರಿಂದ ಬ್ರೆಕ್ಸಿಟ್ಗೆ ವಿರುದ್ಧ ನಿಲುವು ಹೊಂದಿದ್ದ ಪ್ರಧಾನಿ ಡೇವಿಡ್ ಕ್ಯಾಮರಾನ್ಗೆ ಮುಖಭಂಗವಾಗಿ ಅವರು ರಾಜೀನಾಮೆ ನೀಡುವಂತಾಯಿತು. ನಂತರ ಥೆರೇಸಾ ಮೇ ಪ್ರಧಾನಿಯಾದರು.
ಅಂಟಾರ್ಟಿಕಾದಲ್ಲಿ 6 ಪಟ್ಟು ಹೆಚ್ಚು ವೇಗದಲ್ಲಿ ಹಿಮ ಕರಗುತ್ತದೆ.
ಹವಾಮಾನ ವೈಪರೀತ್ಯ ಮತ್ತು ನಿರಂತರವಾಗಿ ಏರಿಕೆಯಾಗುತ್ತಿರುವ ತಾಪಮಾನದಿಂದಾಗಿ ಭೂಮಿಯ ದಕ್ಷಿಣ ಧ್ರುವದಲ್ಲಿರುವ ಅಂಟಾರ್ಟಿಕಾ ಖಂಡದಲ್ಲಿ ಹಿಮ 1980 ಕ್ಕೆ ಹೋಲಿಸಿದರೆ 6 ಪಟ್ಟು ಹೆಚ್ಚು ವೇಗದಲ್ಲಿ ಕರಗುತ್ತಿದೆ ಎಂದು ಇತ್ತೀಚಿನ ಸಂಶೋಧನೆಯಿಂದ ತಿಳಿದು ಬಂದಿದೆ.
ವಿಜ್ಞಾನಿಗಳು ಅಂಟಾರ್ಟಿಕಾ ಖಂಡದ ವೈಮಾನಿಕ ಚಿತ್ರಗಳು, ಉಪಗ್ರಹ ಚಿತ್ರಗಳು, ಉಪಗ್ರಹ ನಕ್ಷೆ ಮತ್ತು ಕಂಪ್ಯೂಟರ್ ಮಾದರಿಗಳನ್ನು ಆಧರಿಸಿ 1979 ರಿಂದ ಇಲ್ಲಿಯವರೆಗೆ ಹಿಮ ಕರಗುತ್ತಿರುವ ಪ್ರಮಾಣವನ್ನು ಲೆಕ್ಕ ಹಾಕಿದ್ದಾರೆ. ಈ ಸಂಶೋಧನೆಯಿಂದ ಆಘಾತಕಾರಿ ಸುದ್ದಿಯೊಂದು ತಿಳಿದು ಬಂದಿದ್ದು, ಮಾನವನ ಹಸ್ತಕ್ಷೇಪದಿಂದಾಗಿ 2009 ರಿಂದ ಇಲ್ಲಿಯವರೆಗೆ ಪ್ರತಿ ವರ್ಷ ಅಂಟಾರ್ಕಿಕಾದಲ್ಲಿ ಜಮೆಯಾಗಿದ್ದ 278 ಬಿಲಿಯನ್ ಟನ್ ಹಿಮ ಕರಗಿ ಸಮುದ್ರ ಸೇರಿದೆ ಎಂದು ತಿಳಿದು ಬಂದಿದೆ.
Comments
Post a Comment